“ ಸ್ವಾತಂತ್ರ್ಯ ದಿನಾಚರಣೆ 2017 ”
70 ರ ಹರೆಯದ “ ಸ್ವಾತಂತ್ರ್ಯ
ದಿನಾಚರಣೆ 2017 ”
ಸ್ವಾತಂತ್ರ್ಯ ದಿನಾಚರಣೆ ಎಂಬ ಪದ ಕೇಳಿದರೆ, ಓದಿದರೆ ಸಾಕು, ನಮಗೆಲ್ಲರಿಗೂ ತಟ್ಟನೆ ನೆನಪಾಗುವುದು ಆಗಸ್ಟ್ 15 ರ ನಮ್ಮ ಭವ್ಯ ಭಾರತದ ಸ್ವಾತಂತ್ರ್ಯ ದಿನಾಚರಣೆ. 1947 ರಿಂದ ಆಚರಿಸಿಕೊಂಡು ಬಂದಿದ್ದು, 2017 ಆಗಸ್ಟ್ 15 ರಂದು 70 ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲು ಸಿದ್ಧರಾಗಿದ್ದೇವೆ. ಇದು ನಮ್ಮ ದೇಶದ ಎಲ್ಲಾ ಧಾರ್ಮಿಕ ಹಬ್ಬಗಳಷ್ಟೇ ಪ್ರಾಮುಖ್ಯತೆ ಹೊಂದಿರುವ ದೇಶಾದ್ಯಂತ ಆಚರಿಸುವ ಅತಿದೊಡ್ಡ ಹಬ್ಬ ಎಂದರೆ ತಪ್ಪಾಗಲಾರದು. ಶಾಲೆಗಳಲ್ಲಿ ಪ್ರತೀ ವರ್ಷ ದೇಶಭಕ್ತಿಯೊಂದಿಗೆ, ಗೌರವಪೂರ್ವಕವಾಗಿ ರಾಷ್ಟ್ರಗೀತೆಯನ್ನು ಒಕ್ಕೊರಲಿನಲ್ಲಿ ಹೇಳಿ, ನಮ್ಮ ದೇಶದ ಹೆಮ್ಮೆಯ ತಿರಂಗಾ ಬಾವುಟವನ್ನು ಹಾರಿಸುವ ಮೂಲಕ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ.
ರಾಷ್ಟ್ರಧ್ವಜ ನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರವು, ನಮ್ಮ ದೇಶದ ಬಾವುಟ ಸಂಹಿತೆ 2002 ರೂಪಿಸಲಾಗಿದೆ. ಅದರಂತೆ, ಬಾವುಟದ ಅಳತೆ ಎಂದರೆ ಉದ್ದ ಮತ್ತು ಎತ್ತರ 3:2 ಅನುಪಾತದಲ್ಲಿರಬೇಕು. ಬಾವುಟ ತಯಾರಿಸಲು ಉಣ್ಣೆಯ ಅಥವಾ ಹತ್ತಿಯ ಅಥವಾ ರೇಷ್ಮೆಯ ದಾರದಿಂದ ನೇಯ್ದ ಬಟ್ಟೆಯನ್ನು ಮಾತ್ರ ಉಪಯೋಗಿಸಬೇಕು. ರಾಷ್ಟ್ರಧ್ವಜವು ಆಯತಾಕಾರವಾಗಿದ್ದು, ಅದನ್ನು ಮೂರು ಸಮಭಾಗ ಮಾಡಿರಬೇಕು. ಬಾವುಟದ ಮೇಲಿನ ಆಯತಾಕಾರದ ಜಾಗದಲ್ಲಿ ಕೇಸರಿ ಬಣ್ಣವನ್ನು, ಕೊನೆಯ ಆಯತಾಕಾರದ ಜಾಗದಲ್ಲಿ ಹಸಿರು ಬಣ್ಣಗಳನ್ನು ಹೊಂದಿರಬೇಕು. ಮಧ್ಯದ ಆಯತಾಕಾರದ ಜಾಗದ ಮಧ್ಯದಲ್ಲಿ ಅಶೋಕ ಚಕ್ರ ಕಡುನೀಲಿ ಬಣ್ಣದಲ್ಲಿ ಸಮಾನಾಂತರದಲ್ಲಿ ಚಕ್ರದ 24 ಕೀಲುಗಳು ಇರಬೇಕು. ರಾಷ್ಟ್ರಧ್ವಜದ ಅಳತೆ 150 ಮಿ.ಮೀ x 100 ಮಿ.ಮೀ ರಿಂದ 6300 ಮಿ.ಮೀ x 4200 ಮಿ.ಮೀ ವರೆಗಿನ 09 ಅಳತೆಯ ಬಾವುಟಗಳನ್ನು ಮಾತ್ರ ಉಪಯೋಗಿಸಲು ಅವಕಾಶ ಮಾಡಿಕೊಡಲಾಗಿದೆ. ರಾಷ್ಟ್ರಧ್ವಜವನ್ನು ಯಾವ ಸರ್ಕಾರಿ ಕಛೇರಿಗಳ ಕಟ್ಟಡದ ಮೇಲೆ ಯಾವ ಸಂದರ್ಭದಲ್ಲಿ ಹಾರಿಸಬೇಕು, ಇಳಿಸಬೇಕು ಹಾಗೂ ಗೌರವ ನೀಡುವ ಬಗ್ಗೆ ವಿವರವಾಗಿ ಪ್ರಸ್ತಾಪಿಸಲಾಗಿದೆ. ಇದಲ್ಲದೇ ರಾಷ್ಟ್ರಧ್ವಜಕ್ಕೆ ಅಗೌರವಿಸುವುದು, ದುರ್ಬಳಿಕೆ ಮಾಡಿಕೊಳ್ಳುವುದು ಹಾಗೂ ಅಪಚಾರ ಮಾಡಿದಲ್ಲಿ ಒಂದು ವರ್ಷ ಜೈಲುವಾಸಕ್ಕೆ ಕಡಿಮೆ ಇಲ್ಲದಂತೆ ಶಿಕ್ಷೆಯನ್ನು ವಿಧಿಸಲು ಸಂಹಿತೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
ನಮಗೆ ಕಾಣಸಿಗುವ ನಮ್ಮ ಬಹಳಷ್ಟು ಹಿರಿಯರೂ ಸಹ ಸ್ವಾತಂತ್ರ್ಯ ಬಂದ ನಂತರ ಹುಟ್ಟಿದವರಾಗಿದ್ದಾರೆ. ಕೇಂದ್ರ ಸರ್ಕಾರದ ಹಿರಿಯ ನಾಗರೀಕ ವರದಿ 2016 ರಲ್ಲಿ ನಮೂದಿಸಿದಂತೆ, 2011 ರ ಜನಗಣತಿಯ ಆಧಾರದ ಮೇರೆಗೆ 1210.90 ಮಿಲಿಯನ್ ಜನಸಂಖ್ಯೆಯಲ್ಲಿ 70 ವರ್ಷ ಪೂರೈಸಿ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರ ಸಂಖ್ಯೆಯು ಹಾಲಿ ದೇಶದ ಜನಸಂಖ್ಯೆಯ 3.70 ಶೇಕಡ ಮಾತ್ರ ಇರುತ್ತದೆ. ಅಂದರೆ ಭಾರತದ ಸ್ವಾತಂತ್ರ್ಯದ ಹಿಂದಿನ ದಿನಗಳಂದು ಬ್ರಿಟಿಷರ ದಬ್ಬಾಳಿಕೆ, ನೋವು, ಸಾವು, ಸಾವಿರಾರು ಜನರ ಬಲಿದಾನಗಳು, ಕ್ಲಿಷ್ಟ ಪರಿಸ್ಥಿತಿಗಳು, ರಾಜರ ಆಡಳಿತಗಳ ಕಷ್ಟಗಳನ್ನು ಅನುಭವಿಸಿದ ವ್ಯಕ್ತಿಗಳು ಕಾಲವಾಗಿದ್ದಾರೆ. ಭಾರತದ ಸ್ವಾಂತ್ರತ್ಯದ ಹಿಂದಿನ ದಿನಗಳು ಹೇಗಿತ್ತು? ಎಂಬ ಬಗ್ಗೆ ನಾವು ಇತಿಹಾಸವನ್ನು ಓದಿ ಅರಿವಿದೆ ಹೊರತು ನಮ್ಮ ಅನುಭವದಲ್ಲಿಲ್ಲ. ಇಂದಿನ ವಿಧ್ಯಾರ್ಥಿಗಳು, ಹದಿಹರೆಯ ಯುವಕರ ಜೊತೆಗೆ ಅವರ ಪೋಷಕರಿಗೂ ಅರಿಯದ ಅನುಭವಿಲ್ಲದ ವಿಚಾರವಾಗಿದೆ.
ಅಂದರೆ ಸ್ವಾತಂತ್ರ್ಯ ಎಂದರೆ ಏನು? ಸ್ವಾತಂತ್ರ್ಯ, ಭಾರತೀಯ ಪ್ರತೀ ಪ್ರಜೆಗೆ ಯಾವ ರೀತಿಯಲ್ಲಿ ಸ್ವಾತಂತ್ರ್ಯ ತಂದು ಕೊಟ್ಟಿದೆ ಎಂಬುದನ್ನು ಅರಿಯಲು ಭಾರತ ಸಂವಿಧಾನವನ್ನು ಅಭ್ಯಾಸಿಸಬೇಕಾಗುತ್ತದೆ. ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವಂತೆ, ಭಾರತದ ಸಂವಿಧಾನದಲ್ಲಿ 06 ಮೂಲಭೂತ ಹಕ್ಕುಗಳಿದ್ದು, ಬಾರತೀಯರಿಗೆಲ್ಲರಿಗೂ ಸಮಾನತೆಯ ಹಕ್ಕು, ನಾಗರೀಕ ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುಧ್ದ ಹಕ್ಕು, ಮತ ಧರ್ಮಾಚರಣೆಗಾಗಿ ಸ್ವಾತಂತ್ರ್ಯ ಹಕ್ಕು, ಸಾಂಸ್ಕøತಿಕ ಮತ್ತು ಶಿಕ್ಷಣದ ಹಕ್ಕು, ಸಾಂವಿಧಾನಕ ಪರಿಹಾರಗಳ ಹಕ್ಕುಗಳನ್ನು ನೀಡಲಾಗಿದೆ. ಪ್ರತೀ ಭಾರತೀಯ ನಾಗರೀಕನ ಮೂಲಭೂತ ಕರ್ತವ್ಯಗಳೇನು? ಅಂದರೆ ಸಂವಿಧಾನದ ಅನುಸಾರ ಏಕತೆ, ಸಮಗ್ರತೆ, ರಾಷ್ಟ್ರ ಧ್ವಜ ಹಾಗೂ ರಾಷ್ಟ್ರಗೀತೆಗೆ ಗೌರವ ನೀಡುವುದರ ಜೊತೆಗೆ ಭಾರತದ ಸಾರ್ವಭೌಮತ್ವವನ್ನು ಕಾಪಾಡುವುದು ಮತು ರಕ್ಷಿಸುವುದು.
ಸ್ವಾತಂತ್ರ್ಯವೆಂದರೆ, ಎಲ್ಲೆಂದರಲ್ಲಿ ಕಸ ಹಾಕುವುದು, ಮನಬಂದಂತೆ ಉಗುಳುವುದು, ಮಲಮೂತ್ರ ವಿಸರ್ಜನೆ ಮಾಡುವುದು, ಗಲೀಜು ಮಾಡುವುದು, ಪರಿಸರ ಹಾಳು ಮಾಡುವುದು ನಮ್ಮ ಹಕ್ಕೆಂಬಂತೆ ಸ್ವೇಚ್ಚಾಚಾರವಾಗಿ ನಡೆದು ಕೊಳ್ಳುತ್ತಿರುವುದನ್ನು ನಾವೆಲ್ಲೂರು ನೋಡಿರುತ್ತೇವೆ. ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರವಲ್ಲ. ನಮ್ಮ ದೇಶದಲ್ಲಿ ಹಲವು ಸಂದರ್ಭಗಳಲ್ಲಿ ದೇಶಭಕ್ತಿ, ದೇಶಾಭಿಮಾನ, ದೇಶಪ್ರೇಮದ ಕೊರತೆ ಎದ್ದು ಕಾಣುತ್ತಿರುವುದು ವಿಷಾಧನೀಯ. ಪ್ರತಿ ವ್ಯಕ್ತಿಯ ಜೀವನದಲ್ಲಿ ದೇಶಭಕ್ತಿಯು ಪ್ರಾಮುಖ್ಯವಾದ ಪಾತ್ರವಹಿಸುತ್ತದೆ. ರಾಷ್ಟ್ರೀಯ ದಿನಾಚರಣೆಗಳಂದು ಮತ್ತು ಭಾರತದ ಪ್ರಖ್ಯಾತ ಕ್ರೀಡೆಯಾದ ಕ್ರಿಕೆಟ್ ಪಂದ್ಯಗಳಲ್ಲಿ ಭಾರತದ ಬಾವುಟ ಹಿಡಿದು ಭಾರತ ಮಾತಾ ಕಿ ಜೈ, I LOVE INDIA ಎಂದು ಘೋಷಣೆ ಕೂಗುವುದರ ಮೂಲಕ ದೇಶಭಕ್ತಿಯನ್ನು ತೋರ್ಪಡಿಸುವುದು ಒಂದು ವಿಧಾನ ಹಾಗೂ ಸಾಮಾನ್ಯವಾಗಿ ಕಾಣಸಿಗುವ ದೃಶ್ಯವಾಗಿದೆ
ಆದರೆ ದೇಶಭಕ್ತಿಯನ್ನು ತೋರ್ಪಡಿಸಲು, ಬದಲಾದ ಇನ್ನಿತರ ವಿಧಾನಗಳನ್ನು ಅನುಸರಿಬೇಕಾದ ಅವಶ್ಯಕತೆ ಇದೆ. ಭಾರತ ದೇಶವು ನಮ್ಮ ಹಳ್ಳಿ, ಊರಿನಿಂದ ದೆಹಲಿಯವರೆಗೆ ಪಸರಿಸಿದೆ. ಪ್ರತೀ ಭಾರತಿಯ ಪ್ರಜೆಯು ಬಾಲ್ಯವಸ್ಥೆಯಿಂದ, ನನ್ನ ಮನೆ, ನನ್ನ ರಸ್ತೆ, ನನ್ನ ಊರು, ನನ್ನ ಶಾಲೆ, ನನ್ನ ಬಾವಿ, ನನ್ನ ಕೆರೆ, ನನ್ನ ನದಿ, ನನ್ನ ಪರಿಸರ, ಎಂದು ಭಾವಿಸಿ ಹಾಳಾಗದಂತೆ ಎಚ್ಚರವಹಿಸಿ, ಶುಚಿತ್ವವನ್ನು ಕಾಪಾಡಿಕೊಳ್ಳುಬೇಕು. ಈ ರೀತಿಯ ನಡತೆಯನ್ನು ನಿಸ್ವಾರ್ಥವಾಗಿ ಬೆಳೆಸಿಕೊಳ್ಳುವುದರ ಜೊತೆಗೆ ಈಗಿರುವ ಸ್ಥಿತಿಯನ್ನು ಉತ್ತಮಗೊಳಿಸಲು ಪ್ರಾಮಾಣಿಕ ಪ್ರಯತ್ನಿಸುವುದು, ಪ್ರತಿ ಭಾರತೀಯ ನಾಗರೀಕರನ ಮೂಲಭೂತ ಆಧ್ಯ ಕರ್ತವ್ಯವೆಂದು ಪರಿಗಣಿಸುವ ಮೂಲಕ ದೇಶಭಕ್ತಿಯನ್ನು ತೋರ್ಪಡಿಸುವ ರೀತಿಗೆ ಹೊಸ ಆಯಾಮವನ್ನು ನೀಡಬೇಕಾಗಿದೆ.
ಭಾರತಕ್ಕಿಂದ ಅತಿ ಚಿಕ್ಕ ದೇಶಗಳಾದ ಸಿಂಗಪೂರು, ಜಪಾನ್, ಇಸ್ರೇಲ್ ಹಾಕಾಂಗ್, ಮುಂತಾದ ದೇಶಗಳಲ್ಲಿ ಆಹಾರ ಬೆಳಯಲು ಸಾಕಷ್ಟು ಭೂಮಿ ಇಲ್ಲ, ನೀರಿಲ್ಲ ಆದರೂ ವಿಶ್ವದಲ್ಲಿ ಆಕರ್ಷಣೀಯವಾದ, ಸ್ವಚ್ಛವಾದ, ಸರ್ವತ್ತೋಮುಖ ಅಭಿವೃದ್ಧಿಹೊಂದುತ್ತಿರುವ ಮಾದರಿ ದೇಶವೆನಿಸಿಕೊಂಡಿದೆ. ಇದಕ್ಕೆ ಆ ದೇಶದ ಪ್ರಜೆಗಳು ತಮ್ಮ ದೇಶದ ಮೇಲೆ ಇಟ್ಟಿರುವ ದೇಶಭಕ್ತಿ ಮತ್ತು ದೇಶಾಭಿಮಾನದ ಜೊತೆಗೆ ಶಿಸ್ತುಬದ್ಧ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವುದು ಮೂಲಭೂತ ಪ್ರೇರಣೆಯಾಗಿದೆ. ಆದ್ದರಿಂದ ಭಾರತ ದೇಶದ ಸರ್ವತೋಮುಖ ಅಭಿವೃದ್ಧಿಗೆ ಭಾರತದ ಪ್ರತೀ ಪ್ರಜೆಯು ದೇಶಭಕ್ತಿ ಮತ್ತು ದೇಶಾಭಿಮಾನ ಮಂತ್ರದ ಜೊತೆಗೆ ಶಿಸ್ತುಬದ್ಧ ಜೀವನ ಶೈಲಿಯನ್ನು ಹೊಂದುವುದು ಮುಖ್ಯ ಪ್ರೇರಣೆಯಾಗಬೇಕಾಗಿದೆ.
ಅದರಂತೆ ನಾವೆಲ್ಲರೂ 2017 ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದೆಂದರೆ, ನಮ್ಮ ದೇಶಭಕ್ತಿ, ದೇಶಾಭಿಮಾನವನ್ನು ದ್ವಿಗುಣ, ತ್ರಿಗುಣಗೊಳಿಸಬೇಕಾದ ಸಮಯ ಕೂಡಿ ಬಂದಿದೆ. ಈ ನಿಟ್ಟಿನಲ್ಲಿ ನಮ್ಮ ವಿಧ್ಯಾರ್ಥಿಗಳ ಪಾತ್ರ ಮತ್ತು ಜವಾಬ್ದಾರಿ ಹೆಚ್ಚಾಗಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ಣುಡಿ ಎಲ್ಲರಿಗೂ ತಿಳಿದಿದೆ. ವಿಧ್ಯಾರ್ಥಿಗಳು ಕಿರಿವಯಸ್ಸಿನಿಂದಲೇ ದೇಶಭಕ್ತಿಯ ಜೊತೆಗೆ ಕರ್ತವ್ಯಗಳನ್ನು ರೂಢಿಸಿಕೊಳ್ಳಬೇಕು. ವಿಧ್ಯಾರ್ಥಿಗಳು ಶಿಸ್ತುಬದ್ಧ ಜೀವನ ನಡೆಸುವುದು ಹೇಗೆ? ಜವಾಬ್ದಾರಿಗಳು ಹಾಗೂ ಕರ್ತವ್ಯಗಳೇನು?
1. ಮನೆಯಲ್ಲಿರುವ ಎಲ್ಲಾ ಹಿರಿಯರೊಂದಿಗೆ ಹಾಗೂ ಶಾಲೆಯಲ್ಲಿರುವ ಶಿಕ್ಷಕರೊಂದಿಗೆ
ಗೌರವದಿಂದ ನಡೆದುಕೊಳ್ಳುವುದು.
2. ಪ್ರತಿದಿನ ಶಾಲೆ ಪ್ರಾರಂಭವಾಗುವ ಸಮಯಕ್ಕೆ ಮುಂಚಿತವಾಗಿ ಶುಭ್ರ ಬಟ್ಟೆಯನ್ನು ಧರಿಸಿ ಶಾಲೆಗೆ ಹಾಜರಾಗುವುದು.
3. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಇಂಗ್ಲಿಷ್, ಹಿಂದಿ, ಗಣಿತ, ಸಮಾಜ ವಿಜ್ಞಾನ್ರ, ವಿಜ್ಞಾನದ
ಯಾವುದೇ ಪಾಠವು ಅರ್ಥವಾಗದಿದ್ದಲ್ಲಿ, ನಿಮ್ಮ ಸಹಪಾಠಿಗಳು ನಾನು ದಡ್ಡ/ದಡ್ಡಿ ಎಂದು
ತಿಳಿದುಕೊಳ್ಳತ್ತಾರೆಂಬ
ಬಗ್ಗೆ ಯೋಚಿಸದೇ, ಸಂಕೋಚವಿಲ್ಲದೇ, ಸಂಬಂದಪಟ್ಟ ಶಿಕ್ಷಕರನ್ನು
ಅಂದೇ ಮರುಪ್ರಶ್ನಿಸಿ, ನಿಮ್ಮ ಅನುಮಾನಗಳಿಗೆ ಉತ್ತರವನ್ನು ಪಡೆಯುವ ಮೂಲಕ ಪಾಠಗಳನ್ನು
ಸರಿಯಾಗಿ ಅರ್ಥಮಾಡಿಕೊಳ್ಳಬೇಕು.
4. ಹಿಂದಿನ ದಿನ ಶಿಕ್ಷಕರು ನೀಡಿದ ಮನೆಕೆಲಸವನ್ನು (Home Work) ತಪ್ಪದೇ ಮಾಡಿಕೊಂಡು
ಬರುವುದು.
5. ಶಾಲೆಯ ಕೊಠಡಿಯಿಂದ ಪ್ರಾರಂಭಿಸಿ, ಸುತ್ತಮುತ್ತಲಿನ ಜಾಗವನ್ನು ಕಸವನ್ನು ಎಲ್ಲಂದರಲ್ಲಿ
ಹಾಕದೇ, ಗಲೀಜು ಮಾಡದೇ ಸ್ವಚ್ಛತೆಯನ್ನು ಕಾಪಾಡುವುದರಿಂದ ಎಲ್ಲರ ಆರೋಗ್ಯ
ಸುಧಾರಿಸಬಹುದಾಗಿದೆ.
6. ಮನೆಯಲ್ಲಿ ಪೋಷಕರ, ಅಣ್ಣ. ಅಕ್ಕ. ಸಂಬಂದಿಕರ ಮೊಬೈಲ್ನಲ್ಲಿರುವ (ಗಿiಜeo ಉಚಿme)
ಗೇಮ್ಗಳನ್ನು ಆಡುವುದನ್ನು ಬಿಟ್ಟು, ನಿಮ್ಮ ಮನೆಯ ಹತ್ತಿರ ಅಥವಾ ಶಾಲೆಯ ಆಟದ
ಮೈದಾನದಲ್ಲಿ ದೈಹಿಕವಾಗಿ ಆಟವಾಡಬೇಕು. (ಉದಾ: ಲಗೋರಿ, ಕಬ್ಬಡಿ, ಚಿನ್ನಿದಾಂಡು, ಕೊಕೊ
ಮುಂತಾದ ಆಟಗಳು) ಶಾಲೆಯಲ್ಲಿರುವ ಆಟದ ಸಾಮಾನುಗಳನ್ನು ಸದುಪಯೋಗ
ಮಾಡಿಕೊಳ್ಳುವುದು. ಅಂತೆಯೇ ಶಾಲೆಯ ಉಪಕರಣಗಳು ಹಾಳಾಗದಂತೆ ಎಚ್ಚರವಹಿಸುವುದು.
7. ನಿಮ್ಮ ಸಹಪಾಠಿಗಳಿಗೆ ಗೌರವದಿಂದ ಮತ್ತು ಮನಸ್ಸು ನೋಯಿಸದಂತೆ ಅನ್ಯೋನವಾಗಿ
ಇರುವುದು. ನಿಮ್ಮ ಸಹಪಾಠಿಗಳು/ಸ್ನೇಹಿತರು ನಿಮ್ಮೊಂದಿಗೆ ಅಥವಾ ಬೇರೆಯವರೊಂದಿಗೆ
ತಪ್ಪಾಗಿ ನಡೆದುಕೊಂಡರೆ, ಕೂಡಲೇ ನಿಮ್ಮ ಶಾಲೆಯ ಶಿಕ್ಷಕರಿಗೆ /ಪೋಷಕರಿಗೆ ತಿಳಿಸುವುದು.
8. ಸಾರ್ವಜನಿಕ ಸ್ಥಳಗಳಾದ ಬಸ್ಸು ನಿಲ್ದಾಣ, ರೈಲು ನಿಲ್ದಾಣ, ಧಾರ್ಮಿಕ ಸ್ಥಳಗಳು, ಸಿನಿಮಾ
ಮಂದಿರಗಳು ಹಾಗೂ ಬೇರೆ ಊರಿಗೆ ಪಿಕ್ನಿಕ್ ಹೋದಾಗ ಶುಚಿತ್ವವನ್ನು ಕಾಪಾಡುವುದು ನಮ್ಮ
ಆಧ್ಯ ಕರ್ತವ್ಯವೆಂದು ಪರಿಗಣಿಸಬೇಕು. ಅಂದರೆ ನಾವು ಉಪಯೋಗಿಸಿ ಬೇಡವಾದ ವಸ್ತುಗಳನ್ನು
ಕೈಸಿಕ್ಕಲ್ಲಿ ಹಾಕದಿರುವುದು. (ಉದಾ: ನೀರು ಕುಡಿದ ಖಾಲಿ ಪ್ಲಾಸ್ಟಿಕ್ ಬಾಟಲ್, ತಿಂಡಿ ತಿಂದ ಖಾಲಿ
ಪ್ಲಾಸ್ಟಿಕ್ ಕವರ್ಗಳು, ತಿಂದು ಉಳಿದ ಹಣ್ಣಿನ ಸಿಪ್ಪೆಗಳು ಮುಂತಾದವುಗಳು)
9. ವಿಧ್ಯಾರ್ಥಿಗಳು ತಮ್ಮ ಆರೋಗ್ಯ ಮತ್ತು ದೈಹಿಕ ಸಧೃಡತೆಯನ್ನು ಕಾಪಾಡಿಕೊಳ್ಳಲು ತಪ್ಪದೇ
ಪ್ರತಿದಿನ ವ್ಯಾಯಾಮ, ಯೋಗವನ್ನು ಮಾಡಬೇಕು.
ನಮ್ಮ ಊರಿನ ಎಲ್ಲಾ ನಾಗರೀಕರು ಸೇರಿಕೊಂಡು, ನಿಸ್ವಾರ್ಥವಾಗಿ, ದೇಶದ ಸರ್ವತ್ತೋಮುಖ ಏಳಿಗೆಗಾಗಿ ಸಹಕಾರ ನೀಡೋಣ, ಸಧೃಢವಾದ ಭಾರತವನ್ನು ನಿರ್ಮಿಸಲು ಪಣತೊಡೋಣ, ಕೈಜೋಡಿಸೋಣ. ಇದು ನಮ್ಮೆಲರ ಆಧ್ಯ ಕರ್ತವ್ಯವಾಗಿದೆ.
ಭಾರತ ಮಾತಾ
ಕಿ
ಜೈ.......
Comments
Post a Comment